ಸೋಮಶೇಖರನಾಯಕ 1

	ಕೆಳದಿ ವಂಶದ ರಾಜ (1664-71). ಭದ್ರಪ್ಪನಾಯಕನಿಗೆ ಪುತ್ರಸಂತಾನವಿಲ್ಲದಿದ್ದುದರಿಂದ ಅವನ ತಮ್ಮ ಮತ್ತು ಶಿವಪ್ಪನಾಯಕನ ಕಿರಿಯ ಪುತ್ರ ಹಿರಿಯ ಸೋಮಶೇಖರನಾಯಕ ಪಟ್ಟಕ್ಕೆ ಬಂದ.

	ಭದ್ರಪ್ಪನಾಯಕನ ಕಾಲದಲ್ಲಿ ಕೆಳದಿ ಅರಸರು ಮೈಸೂರು ಒಡೆಯರಿಗೆ ಕಳೆದುಕೊಂಡಿದ್ದ ಚಿಕ್ಕೋಡು, ಬೆಳಗೋಡು, ಕಣತೂರು, ಅಬ್ಬಿಣ ಮತ್ತು ಬೇಲೂರುಗಳನ್ನು ಸೋಮಶೇಖರನಾಯಕ ವಶಪಡಿಸಿ ಕೊಂಡ. ಇದಕ್ಕೆ ಪ್ರತಿಯಾಗಿ ಮೈಸೂರಿನ ದಳವಾಯಿ ನಂಜನಾಥಯ್ಯ ಕಳಸ, ಖಾಂಡ್ಯ, ದಾನಿವಾಸ, ಹೆಬ್ಬೆ, ಜಾಗರ ಬಿದನೂರು, ಹೊನ್ನೂರು ಮತ್ತು ಇಕ್ಕೇರಿಗಳಿಗೆ ತುಂಬಾ ಹಾನಿಯುಂಟುಮಾಡಿದ (1664). ಪರಿಸ್ಥಿತಿ ವಿಕೋಪಕ್ಕೆ ಹೋಗಲು ಸೋಮಶೇಖರನಾಯಕ ತನ್ನ ರಾಯಭಾರಿ ಪುರುಷೋತ್ತಮಯ್ಯನನ್ನು ಆನೆ, ಕುದುರೆ, ಆಭರಣ ಮತ್ತು ಬಟ್ಟೆಗಳೊಂ ದಿಗೆ ಶ್ರೀರಂಗಪಟ್ಟಣಕ್ಕೆ ಕಳಿಸಿ, ಶಾಂತಿಸಂಧಾನ ಪ್ರಾರಂಭಿಸಿದನೆಂದು ಚಿಕ್ಕದೇವರಾಯವಿಜಯ ಹೇಳುತ್ತದೆ. ಈ ವಿಜಯದಿಂದ ಮೈಸೂರಿನವರು ಚಿಕ್ಕನಾಯಕನಹಳ್ಳಿ, ಹಾಸನ, ಸಕ್ಕರೆಪಟ್ಟಣ ಮತ್ತು ವಸ್ತಾರೆವರೆಗೂ ತಮ್ಮ ಪ್ರಭಾವವನ್ನು ಬೀರಿದರು.

	ತರೀಕೆರೆಯ ಹನುಮಪ್ಪನಾಯಕ ತನ್ನ ಅವ್ಯವಸ್ಥಿತ ವ್ಯವಹಾರಗಳಿಂದ ರಾಜ್ಯವನ್ನು ಹಾಳು ಮಾಡುತ್ತಿದ್ದಾನೆಂದು ಕೇಳಿ ಸೋಮಶೇಖರನಾಯಕ ತನ್ನ ಸೇನಾನಿ ಸಬ್ಬುನ್ನೀಸ್ ಕೃಷ್ಣಪ್ಪಯ್ಯನನ್ನು ಕಳಿಸಿ ಹನುಮಪ್ಪನಾಯಕ ನನ್ನು ಬಿದನೂರಿಗೆ ಕರೆತರಿಸಿ, ಆತನ ಮಗ ಸೀತಾರಾಮಪ್ಪನಾಯಕನನ್ನು ಪಟ್ಟಕೇರಿಸಿ ಆ ಸಂಸ್ಥಾನವನ್ನು ಉದ್ಧರಿಸಿದನೆಂದು ಕೆಳದಿ ನೃಪವಿಜಯ ಹೇಳುತ್ತದೆ. ಸೋಮಶೇಖರನಾಯಕನ ಕೊನೆಯ ದಿನಗಳು ಯಾತನಾ ಮಯವಾಗಿದ್ದವು. ಬರಮೆ ಮಾವುತನೆಂಬ ಕುಹಕಿ ನೀವು ಆನೆಯ ಮದವನ್ನು ಸೇವಿಸಿದರೆ ದೇಹದಾಢ್ರ್ಯ ಹೆಚ್ಚುವುದೆಂದು ಹೇಳಿ ಅದನ್ನು ಇವನಿಗೆ ಕುಡಿಸಿದ. ಇದರಿಂದ ಸೋಮಶೇಖರನಾಯಕ ಉನ್ಮಾದಾವಸ್ಥೆಗೆ ಬಂದು ಭ್ರಮಿಷ್ಠನಾಗಿ ಕ್ಷುದ್ರ ಜನರೊಡನೆ ಸ್ವೇಚ್ಛೆಯಾಗಿ ವ್ಯವಹರಿಸ ಲಾರಂಭಿಸಿದ ಎಂದು ಕೆಳದಿ ನೃಪವಿಜಯ ಹೇಳುತ್ತದೆ. ಇವನ ಪ್ರಜೆಗಳು ಇವನ ದುವ್ರ್ಯಾಪಾರಗಳನ್ನು ಸಹಿಸದೆ ಕೊಂದು ಹಾಕಿದರೆಂದು ಬ್ರಿಟಿಷ್ ಪ್ರವಾಸಿ ಜಾನ್ ಫ್ರೈಯರ್ ಬರೆದಿದ್ದಾನೆ. ಇವನ ಅನಂತರ ಇವನ ಪತ್ನಿ ಚೆನ್ನಮ್ಮಾಜಿ ಆಳಿದಳು.				
		(ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ